ಇಟ್ಟಿಮರ
ಲೊಗಾನಿಯೇಸಿ ಕುಟುಂಬಕ್ಕೆ ಸೇರಿದ ಒಂದು ವೃಕ್ಷ; ಕೆಲವು ಪ್ರಭೇದಗಳು ಬಳ್ಳಿಗಳಂತೆ ಬೇರೆ ಮರಗಳ ಮೇಲೆ ಹಬ್ಬುವುದೂ ಉಂಟು. ಹೆಮ್ಮುಷ್ಟಿ, ಕಾಸರಕ, ಕಂಜೀರ, ನಂಜಿನ ಕೊರಡು ಇತ್ಯಾದಿಗಳು ಈ ವೃಕ್ಷ ಜಾತಿಯ ಕೆಲವು ಪ್ರಭೇದಗಳು. ಇಟ್ಟಿಮರಗಳು 30 ಮೀಟರಿನಷ್ಟು ಎತ್ತರ ಬೆಳೆಯುತ್ತವೆ. ಚಳಿಗಾಲದಲ್ಲಿ ಎಲೆಗಳು ಉದುರುತ್ತವೆ. ವಸಂತಕಾಲದಲ್ಲಿ ಹೂಗಳು ಅರಳುತ್ತವೆ. ಹೂಗಳ ಬಣ್ಣ ಹಸಿರು ಬಿಳುಪು. ಒಂದೊಂದು ಹೂ ಗೊಂಚಲಿನಲ್ಲೂ ಅನೇಕ ಹೂಗಳಿರುತ್ತವೆ. ಮಾಗಿದ ಹಣ್ಣಿನ ಬಣ್ಣ ಕೆಂಪು. ಇದರ ದಪ್ಪ ಸುಮಾರು 2.5 ಸೆಂ.ಮೀ. ಒಳಗಡೆ ಅನೇಕ ಬೀಜಗಳು. ಬೀಜ ಚಪ್ಪಟೆಯಾಗಿ ಒಂದೆಡೆ ಉಬ್ಬಿಕೊಂಡು, ಮತ್ತೊಂದೆಡೆ ತಗ್ಗಾಗಿದೆ. ಇಕ್ಕಡೆಗಳಲ್ಲೂ ಅದಕ್ಕೆ ಮೃದುವಾದ ರೋಮಗಳಿವೆ. ಕಂಕುಳು ಮೊಗ್ಗುಗಳು ಗಟ್ಟಿಯಾದ ಮುಳ್ಳಾಗಿ ರೂಪಾಂತರವಾಗಿರುತ್ತವೆ. ಪಾಶ್ಚಾತ್ಯ ದೇಶಗಳ ಔಷಧ ಪದ್ಧತಿಯಲ್ಲಿ ಈ ಮರದ ಉಪಯೋಗ 19ನೆಯ ಶತಮಾನದಲ್ಲಿ ಬಳಕೆಗೆ ಬಂತು. ಮರದ ಬೀಜದಲ್ಲಿ ಸ್ಟಿಕ್‍ನೈನ್ ಮತ್ತು ಬ್ರೂಸಿನ್ ಎಂಬ ನೈಟ್ರೋಜನ್ ಕ್ಷಾರ ದ್ರವ್ಯಗಳು ಇವೆ. ಸ್ಟಿಕ್‍ನೈನನ್ನು ನರಗಳ ಬೇನೆಯಲ್ಲಿ ಬಲವರ್ಧಕವಾಗಿಯೂ ಶ್ವಾಸರೋಗಗಳಲ್ಲಿ ಉತ್ತೇಜಕವಾಗಿಯೂ ತೀವ್ರ ಮಲಬದ್ಧತೆಯ ನಿವಾರಣೆಗೂ ಕೊಡುವುದುಂಟು. ಆಯುರ್ವೇದ ವೈದ್ಯಪದ್ಧತಿಯಲ್ಲಿ ಬಹುಕಾಲದಿಂದ ಈ ಮರದ ಹಣ್ಣು ಮತ್ತು ಬೀಜಗಳ ಉಪಯೋಗ ಪ್ರಚಲಿತವಿದೆ. ವಾತ, ಕಫ, ರಕ್ತಸಂಬಂಧರೋಗ, ಕಜ್ಜಿ, ಮೂಲವ್ಯಾಧಿ, ಕಾಮಾಲೆ ಇತ್ಯಾದಿ ರೋಗಗಳಲ್ಲಿ ಹಣ್ಣು ಮತ್ತು ಬೀಜವನ್ನು ಉಪಯೋಗಿಸುತ್ತಾರೆ. ಯುನಾನಿ ಔಷದ ಪದ್ಧತಿಯ ಪ್ರಕಾರ ಹಣ್ಣು ಮತ್ತು ಬೀಜವನ್ನು ಹುಳುಕಡ್ಡಿ, ಮೂತ್ರಬಂಧನ, ಸೊಂಟದ ರೋಗಗಳು ಇತ್ಯಾದಿಗಳಿಗೆ ಬಳಸುವರು. ಕಾಮೋತ್ತೇಜಕವಾಗಿಯೂ ಉಪಯೋಗಿಸುವುದುಂಟು. ಎಲೆಯನ್ನು ಅರೆದು ಬೆಚ್ಚಾರ (ಪೋಲ್ಟೀಸ್) ಮಾಡಿಹುಳು ಬಿದ್ದಿರುವ ಗಾಯಗಳಿಗೆ ಕಟ್ಟಿದರೆ ಹುಳುಗಳು ಸಾಯುತ್ತವೆ. ಬೇರಿನ ತೊಗಟೆಯನ್ನು ನಿಂಬೆಹಣ್ಣಿನ ರಸದಲ್ಲಿ ತೇದು ಗುಳಿಗೆಮಾಡಿ ಕಾಲರಾ ಬೇನೆಯಲ್ಲಿ ಕೊಟ್ಟರೆ ಗುಣ ಕಂಡುಬರುತ್ತದೆ. ಕೊಂಕಣದಲ್ಲಿ ಚಿಟಿಕೆಯಷ್ಟು ಬೀಜದ ಪುಡಿಯನ್ನು ರುಚಿ ಪದಾರ್ಥದೊಡೆನ ಸೇರಿಸಿ ಹೊಟ್ಟೆ ನುಲಿತಕ್ಕೆ ಕೊಡುತ್ತಾರೆ. ಉದ್ದವಾದ ರೆಂಬೆಯ ಮಧ್ಯಭಾಗವನ್ನು ಕಾಯಿಸಿ ಕತ್ತರಿಸಿದಾಗ ಇಕ್ಕೆಡೆಗಳಲ್ಲೂ ಸ್ರವಿಸುವ ರಸವನ್ನು ಬಟ್ಟಲಿನಲ್ಲಿ ಸಂಗ್ರಹಿಸಿ ಕಾಲರಾ ಬಂದಾಗ ಕೆಲವುತೊಟ್ಟುಗಳನ್ನು ಕೊಟ್ಟರೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಬೀಜಗಳನ್ನು ಬೆಕ್ಕು, ನಾಯಿ ಮುಂತಾದವನ್ನು ಕೊಲ್ಲಲು ಉಪಯೋಗಿಸುತ್ತಾರೆ. ಬೇರಿನ ಕೊರಡನ್ನು ಹಂಚಿನ ಮೇಲೆ ನೀರುಹಾಕಿ ತೇದು ಜ್ವರದಲ್ಲಿ ದೇಹಕ್ಕೆ ಲೇಪಿಸುತ್ತಾರೆ. ಹೀಗೆ ಮಾಡುವುದರಿಂದ ಜ್ವರದ ತಾಪ ಇಳಿಯುತ್ತದೆ.					
(ಎಚ್.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ